ಅನ್ನಂಭಟ್ಟ
ಹದಿನಾರನೆಯ ಶತಮಾನದ ಕೊನೆಯಲ್ಲಿದ್ದ ಆಂಧ್ರಪ್ರದೇಶದ ಋಗ್ವೇದಿ ಬ್ರಾಹ್ಮಣ. ಕೃಷ್ಣಾನದಿಯ ತೀರದ ಒಂದು ಗ್ರಾಮ ಇವನ ಜನ್ಮಸ್ಥಳ. ಕೆಲವರು ಮಲ್ಲಿನಾಥನಿಗಿಂತ ಮುಂಚೆ ಭಟ್ಟೋದೀಕ್ಷಿತನಿಗಿಂತ ಹಿಂದೆ ಇದ್ದನೆಂದು ಅಭಿಪ್ರಾಯ ಪಡುತ್ತಾರೆ. ಈ ವಂಶದವರು ಈಗಲೂ ಕೃಷ್ಣಾನದಿಯ ಸಮೀಪದಲ್ಲಿ ಕೇಶವಪುರವೆಂಬ ಗ್ರಾಮದಲ್ಲಿ ವಾಸವಾಗಿದ್ದಾರೆ. ಈತ ರಚಿಸಿದ ಕೈಯಟವ್ಯಾಖ್ಯಾ ಗ್ರಂಥ ಪ್ರದೀಪೋದ್ಯೋತನದಲ್ಲಿ ಹೇಳಿಕೊಂಡಿರುವಂತೆ ರಾಘವ ಸೋಮಯಾಜಿಯ ಕುಲದಲ್ಲಿ ಹುಟ್ಟಿದ ತಿರುಮಲಾಚಾರ್ಯನ ಪುತ್ರನೆಂದು ವ್ಯಕ್ತವಾಗುತ್ತದೆ. ಇವನ ಅಣ್ಣನಾದ ರಾಮಕೃಷ್ಣಭಟ್ಟನ ಸಿದ್ಧಾಂತಕೌಮುದಿಗೆ ಸಿದ್ಧಾಂತ ರತ್ನಾಕರವೆಂಬ ಪ್ರೌಢ ವ್ಯಾಖ್ಯಾನಗ್ರಂಥವನ್ನು ಬರೆದಿರುತ್ತಾನೆ. ಈತ ಚತುಃಶ್ಶಾಸ್ತ್ರಪಂಡಿತ. ತರ್ಕಸಂಗ್ರಹ, ತರ್ಕಸಂಗ್ರಹದೀಪಿಕಾ, ತರ್ಕಭಾಷಾ, ತತ್ವಚಿಂತಾಮಣ್ಯಾಲೋಕ ಸಿದ್ಧಾಂಜನ, ತತ್ವಬೋಧಿನೀಟೀಕಾ, ಭಾಷ್ಯಪ್ರದೀಪೋದ್ಯೋತನ, ಮಿತಾಕ್ಷರಾ ಎಂಬ ಕಾಶಿಕಾನುಸಾರಿ ಪಾಣಿನೀಯ ಸೂತ್ರವೃತ್ತಿ, ರಾಣಕೋಜ್ಜೀವಿನೀ ಮಿತಾಕ್ಷರಾ ಎಂಬ ಬ್ರಹ್ಮಸೂತ್ರವೃತ್ತಿ ಎಂಬ ಶಾಸ್ತ್ರ ಗ್ರಂಥಗಳನ್ನು ರಚಿಸಿರುತ್ತಾನೆ. ಕಣಾದ ಮುನಿಗಳ ಸೂತ್ರರೂಪವಾದ ಪ್ರಮೇಯ ಪ್ರಧಾನ ವೈಶೇಷಿಕ ಶಾಸ್ತ್ರ ಹಾಗೂ ಗೌತಮಮುನಿಗಳ ಪ್ರಮಾಣಪ್ರಧಾನ ನ್ಯಾಯಶಾಸ್ತ್ರ ಎರಡನ್ನೂ ಸೇರಿದ ನ್ಯಾಯವೈಶೇಷಿಕ ಶಾಸ್ತ್ರಗಳ ಸಿದ್ಧಾಂತಗಳನ್ನು ಸಂಗ್ರಹಿಸಿ ತರ್ಕಸಂಗ್ರಹ ಗ್ರಂಥವನ್ನು ಈತ ಬರೆದಿರುತ್ತಾನೆ. ಈ ಗ್ರಂಥ ಬಾಲಕರಿಗೆ ಮಾತ್ರವಲ್ಲದೆ ಪಂಡಿತರಿಗೂ ಉಪಯುಕ್ತವಾದುದು. ಸಂಗ್ರಹವಾದ ಈ ಗ್ರಂಥಕ್ಕೆ ಮಕ್ಕಳಿಗೂ ಅರ್ಥವಾಗುವಂಥ ತರ್ಕಸಂಗ್ರಹದೀಪಿಕಾ ಎಂಬ ವ್ಯಾಖ್ಯಾನವಿದೆ. ಈ ಗ್ರಂಥ ಭಾರತದ ಎಲ್ಲ ಭಾಷೆಗಳಲ್ಲಿ ಅಲ್ಲದೆ ಪ್ರಪಂಚದ ನಾನಾ ಭಾಷೆಗಳಲ್ಲಿ ಅನುವಾದವಾಗಿದೆ. ದ್ರವ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ, ಸಮವಾಯು, ಅಭಾವಗಳೆಂಬ ಏಳು ಲಕ್ಷಣ ವಿಭಾಗಗಳನ್ನು ತರ್ಕಸಂಗ್ರಹದಲ್ಲಿ ಹೇಳಲಾಗಿದೆ. ಪದಾರ್ಥ ತತ್ವಜ್ಞಾನಕ್ಕೆ ಪರಮಪ್ರಯೋಜನ ಮೋಕ್ಷ. ಮನನಕ್ಕೆ ಪ್ರಯೋಜಕವಾದ ಪದಾರ್ಥನಿರೂಪಣದ ಮೂಲಕ ತರ್ಕಶಾಸ್ತ್ರ ಮೋಕ್ಷೋಪಯೋಗಿಯಾಗುತ್ತದೆಂದು ದೀಪಿಕಾ ವ್ಯಾಖ್ಯಾನದ ಕೊನೆಯಲ್ಲಿ ಹೇಳಿದೆ.									
(ಜಿ.ವಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ